Sunday 25 December 2011

ಗೆಂದಾಲಾಲ್ ದಿಕ್ಷಿತ್ -- ಅಪರೂಪದ ಅಜ್ಞಾತ ಕ್ರಾಂತಿಕಾರಿ..!!!


     
   
ಭಾಳ ಅಂದ್ರೆ ಆ ಹುಡುಗನಿಗೆ 9-10 ವರ್ಷ ವಯಸ್ಸಿರಬಹುದು.. ಅವತ್ತೊಂದಿನ, ಬೆಳಗಿನ ನಸುಕಿನಲ್ಲಿಯೇ ಎದ್ದು, ತನ್ನೂರಿನಲ್ಲಿ ಹರಿಯುತ್ತಿದ್ದ ಯಮುನಾ ನದಿಗೆ ತೆರಳಿ ಸ್ನಾನ ಮಾಡಿ ಶುದ್ಧನಾದ. ಮಿಂದೆದ್ದು ಬಂದವನೇ, ದಡದ ಮೇಲಿದ್ದ ಕಾಳಿಯ ಗುಡಿಯೆಡೆ ಹೊರಟ.. ಪೂಜೆಗೆ ಹೋಗ್ತಾ ಇರಬಹುದೆಂದು ಎಲ್ಲರೂ ಅನ್ಕೊಂಡಿದ್ರು.. ಆದ್ರೆ ಅವನು ಹೋಗ್ತಿದ್ದಿದ್ದು ಪೂಜೆಗಲ್ಲ, ಪ್ರತಿಜ್ಞೆಗೆ..!!!!!!!!
" ತಾಯೆ, ಆಂಗ್ಲರ ದುರಾಡಳಿತದಲ್ಲಿ ನಲುಗುತಿರುವ ದೇಶದ ಸ್ವಾತಂತ್ರ್ಯವೇ ನನ್ನ ಜೀವನದ ಧ್ಯೇಯ.. ನನ್ನ ಕೊನೆ ಉಸಿರಿನವರೆಗೂ, ಕೊನೆ ರಕ್ತದ ಹನಿ ಪುಟಿಯುವವರೆಗೂ ಭಾರತಿಯ ಸೇವೆಗಾಗಿ ನನ್ನ ಬದುಕು ಮುಡಿಪು", ಅಂತ ಆ ಸಣ್ಣ ಬಾಲಕ ಶಪಥಗೈದಿದ್ದ..!!!!

ಅವನ ಹೆಸರು "ಗೆಂದಾಲಾಲ್ ದಿಕ್ಷಿತ್". 1888 ರಲ್ಲಿ, ಉತ್ತರಪ್ರದೇಶದ ಆಗ್ರಾ ಜಿಲ್ಲೆಯಲ್ಲಿ ಹಳ್ಳಿಯೊಂದರಲ್ಲಿ  ಜನನ. ಸಣ್ಣವನಿಂದಲೂ ದೇಶಭಕ್ತಿಯನ್ನು ಮೈಗೂಡಿಸಿಕೊಂಡಿದ್ದವ. ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಮುಗಿಸಿದ ಮೇಲೆ, DAV ಶಾಲೆಯಲ್ಲಿ ಶಿಕ್ಷಕನಾಗಿ ಸೇರಿಕೊಂಡ..

ಅದು 1905. 'ಒಡೆದು ಆಳುವ' ನೀತಿಯನ್ನೇ ಅನುಸರಿಸುತ್ತಿದ್ದ ಆಂಗ್ಲರ ಅಧಿಕಾರಿ "ಲಾರ್ಡ್ ಕರ್ಜನ್" ಬಂಗಾಳವನ್ನು ವಿಭಜಿಸಿದ. ಅವನೇನೋ ಜನರನ್ನು ಒಡೆಯಲು ಹಾಗೆ ಮಾಡಿದ.. ಆದರೆ ಆದದ್ದೇ ಬೇರೆ. ಅವನ ಈ ಕೃತ್ಯಕ್ಕೆ ಇಡೀ ದೇಶವೇ ಎದ್ದು ನಿಂತಿತು. ಎಲ್ಲೆಲ್ಲೂ ಹರತಾಳ, ಮೆರವಣಿಗೆ, ಹೋರಾಟಗಳು ನಡೆದವು. ತಿಲಕರಂತೂ ತಮ್ಮ ಕೇಸರಿ ಪತ್ರಿಕೆಯಲ್ಲಿ ಪ್ರತಿದಿನ, ಬಂಗಾಳ-ವಿಭಜನೆಯ ವಿರುದ್ಧ ಬೆಂಕಿಯ ಬರಹಗಳನ್ನು ಪ್ರಕಟಿಸ್ತಿದ್ರು.. ಅದರ ಕಿಡಿ, ಗೆನ್ದಾಲಾಲನಿಗೂ ಬಡಿಯಿತು. ತಿಲಕರಿಂದ ತುಂಬಾ ಸ್ಫೂರ್ತಿಗೊಂಡ ಗೆಂದಾಲಾಲ್, ಅವರು ಶುರುಮಾಡಿದ ಶಿವಾಜಿ-ಉತ್ಸವ, ಸಾರ್ವಜನಿಕ ಗಣೇಶ-ಉತ್ಸವ ಇದರಿಂದಲೂ ಪ್ರಭಾವಿತನಾದ. ಶಿವಾಜಿಯ ಚರಿತೆಯನ್ನು ಓದಿ, ಆ ಛತ್ರಪತಿಯ ಸಂಘಟನಾ ಕೌಶಲ್ಯ, ಧೈರ್ಯಗಳಿಂದ ಉತ್ತೇಜಿತಗೊಂಡ. ಗೆಂದಾಲಾಲ್ ಸಣ್ಣವನಿದ್ದಾಗ ಮಾಡಿದ್ದ ಪ್ರತಿಜ್ಞೆ ಈಡೇರುವ ಕಾಲ ಆಗ ಬಂದಿತ್ತು.. ಅದರ ಫಲವೇ, ಭಾರತದ ಕ್ರಾಂತಿ ಇತಿಹಾಸದಲ್ಲಿ, ಮತ್ತೊಂದು ಕ್ರಾಂತಿ ಸಂಘಟನೆಯ ಜನನ..
ಅದುವೇ ಗೆನ್ದಾಲಾಲನ "ಶಿವಾಜಿ ಸಮಿತಿ"..!!!

ಮೊದಮೊದಲು ಗೆನ್ದಾಲಾಲ್, ಊರಿನ ವಿದ್ಯಾವಂತರನ್ನ, ಶ್ರೀಮಂತರನ್ನ ಸೇರಿಸಿಕೊಂಡು ಸಂಘಟನೆ ಬೆಳೆಸುವ ಉತ್ಸಾಹದಲ್ಲಿದ್ದ.. ಆದರೆ ಆತ ಕಂಡಿದ್ದು ನಿರಾಶೆ.. ಬ್ರಿಟಿಷರ ಆಂಗ್ಲ ಶಿಕ್ಷಣದಲ್ಲಿ ಬೆಳೆದಿದ್ದ ವಿದ್ಯಾವಂತರೆಲ್ಲ, ಭಾರತದ ಬಗ್ಗೆ ಕಿಂಚಿತ್ತೂ ಗೌರವ ಉಳಿಸಿಕೊಂಡಿರಲಿಲ್ಲ. ಆಂಗ್ಲರು ಭಾರತದ ಉದ್ಧಾರಕ್ಕಾಗಿಯೇ ಬಂದಿದ್ದಾರೆ ಎಂಬ ಭ್ರಮೆಯಲ್ಲಿದ್ದರು.. ಜೊತೆಗೆ ಊರಿನ ಶ್ರೀಮಂತರೂ ಆಂಗ್ಲರ ಬಾಲಬಡುಕರಾಗಿದ್ದರು.. ಹೀಗಾಗಿ ಗೆನ್ದಾಲಾಲನಿಗೆ ಯಾವ ಸಹಾಯವೂ ಸಿಗಲೇ ಇಲ್ಲ..

ಆಗ ಅವನಿಗೆ ಹೊಳೆದದ್ದೆ ಚಂಬಲ್ ಕಣಿವೆ.. ಕಳ್ಳ-ಕಾಕರ ಪ್ರಸಿದ್ಧ ತಾಣ, ಚಂಬಲ್ ಕಣಿವೆ ಇದ್ದದ್ದು ಅಲ್ಲೇ. ಅಲ್ಲಿನ ಡಕಾಯಿತರನ್ನೇ ಸೇರಿಸಿಕೊಂಡು ಸಂಘಟನೆ ಕಟ್ಟುವ ಸಂಕಲ್ಪ ಮಾಡಿದ.. ಅಂಥ ವಿಚಾರ ಬಂದೊಡನೆ, ಚಂಬಲ್ ಕಣಿವೆಗೆ ಹೊರಟು ನಿಂತ.ಅಂಥಾ ಕಡಿದಾದ ಕಣಿವೆಯಲ್ಲಿ ಸಂಚರಿಸುವುದು ಅದೇನೂ ಅಷ್ಟು ಸಣ್ಣ ಕೆಲಸವಾಗಿರಲಿಲ್ಲ..ಆದರೂ ದೇಶಕ್ಕಾಗಿ ದುಡಿಯಲೆಬೇಕೆಂಬ ಇಚ್ಛೆ ಅವನಲ್ಲಿ ಭೀಮಬಲ ತುಮ್ಬಿಸಿತ್ತು..ಅಲ್ಲಿನ ಡಕಾಯಿತರನ್ನ ಭೇಟಿ ಮಾಡಿ ಅವರ ಮನವೊಲಿಸುವ ಕೆಲಸ ಮಾಡಿದ.
ನಿಜ ಹೇಳ್ಬೇಕಂದ್ರೆ, ಆ ಡಕಾಯಿತರು ಮೂಲತಃ ಕ್ರೂರಿಗಳಲ್ಲ.. ಆಂಗ್ಲರ ದಬ್ಬಾಳಿಕೆಗೆ, ಸಮಾಜದ ಕೆಲವು ಹುಳುಕುಗಳಿಗೆ ನೊಂದು, ಬೇಸತ್ತು, ಆಕ್ರೋಶದಿಂದ ಕಳ್ಳರಾದವರು.. ಆ ವಿಷಯ ಗೆನ್ದಾಲಾಲನಿಗೂ ಗೊತ್ತಿತ್ತು. ಹೀಗಾಗಿಯೇ, ಅವರನ್ನು ಬ್ರಿಟಿಷರ ವಿರುದ್ಧ ಸಂಘಟಿಸುವುದು, 'ಶಿಕ್ಷಕ'ನಾಗಿದ್ದ ಅವನಿಗೆ  ಅಷ್ಟೇನೂ ಕಷ್ಟವಾಗಲಿಲ್ಲ.. ಪ್ರತಿನಿತ್ಯ 'ಶಿವಾಜಿ', 'ಮಹಾರಾಣಾ ಪ್ರತಾಪ ಸಿಂಹ','ಝಾನ್ಸಿಯ ರಾಣಿ' ಯ ಕಥೆಗಳನ್ನು ಹೇಳಿ, ಆ ಕಳ್ಳರ ಮನಸ್ಸನ್ನು ದೇಶಭಕ್ತಿಯೆಡೆ ಪರಿವರ್ತಿಸಿದ. ಹೀಗೆ ಸಂಘಟನೆಯನ್ನು ಕಟ್ಟಿ ಬ್ರಿಟಿಷರ ವಿರುದ್ಧ ನಿರಂತರ ಯುದ್ಧ ಸಾರಿದ. ಅನೇಕ ಅಧಿಕಾರಿಗಳ ಮನೆಗಳ ದರೋಡೆಯನ್ನೂ ಮಾಡಿದ. ಗೆನ್ದಾಲಾಲ್ ಆಂಗ್ಲರಿಗೆ ಬೆಮ್ಬೆತ್ತಿದ ಬೇತಾಳದಂತೆ ಆಗಿದ್ದ.

ಆಗಲೇ, ಮತ್ತೊಂದು ಬೆಳವಣಿಗೆ ಆ ಪ್ರಾಂತದಲ್ಲಾಯಿತು. ರಾಮ್ ಪ್ರಸಾದ್ ಬಿಸ್ಮಿಲ್ ಆಗಿನ್ನೂ ಯುವಕ. ಅವನು ಷಹಜಹಾನ್ ಪುರದಲ್ಲಿ, "ಮಾತೃವೇದಿ" ಎಂಬ ಕ್ರಾಂತಿ ಸಂಘಟನೆ ಕಟ್ಟಿ, ಕಾರ್ಯ ನಿರ್ವಹಿಸುತ್ತಿದ್ದ. ಬಿಸ್ಮಿಲ್ಲನಿಗೆ, ಸ್ವಾಮೀ ಸೋಮದೇವರಿಂದ ಈ ಗೆನ್ದಾಲಾಲನ ಬಗ್ಗೆ ತಿಳಿಯಿತು. ಕೂಡಲೇ, ಬಿಸ್ಮಿಲ್, ಗೆನ್ದಾಲಾಲ್ ನನ್ನು ಸಂಧಿಸಿ ತನಗೆ  ಮಾರ್ಗದರ್ಶನ ನೀಡಬೇಕೆಂದು ಕೋರಿದ..ಕ್ರಾಂತಿಯ ಬಗ್ಗೆ ಚರ್ಚೆ ನಡೆಸಿದ.. ಗೆನ್ದಾಲಾಲನಿಗೂ ಬಿಸ್ಮಿಲ್ಲನ ಪರಿಚಯ ಇನ್ನಷ್ಟು ಬಲ ತಂದಿತು.. ಇಬ್ಬರೂ ಕೂಡಿ ಮತ್ತೆ ಸಂಘಟನೆಯನ್ನು ಬಲಗೊಳಿಸಿದರು.

ಮಣಿಪುರಿ ಅನ್ನೋ ಗ್ರಾಮ. ಅಲ್ಲಿ ಬಿಸ್ಮಿಲ್ ಜನರನ್ನು ಸಂಘಟಿಸಲು, "ಮಣಿಪುರಿಯ ಪ್ರತಿಜ್ಞೆ" ಎಂಬ ಕರಪತ್ರ ಹಂಚಿದ. ಜೊತೆಗೆ ಗೆನ್ದಾಲಾಲನ ಜೊತೆಗೂಡಿ, ಮಣಿಪುರಿಯ ಕೆಲವು ಶ್ರೀಮಂತರ ಮನೆಗಳ ಮೇಲೆ, ದಾಳಿಯೂ ಆಯಿತು.. ಆದರೆ, ಜೊತೆಗೆ ಬ್ರಿಟಿಷರೂ ಎಚ್ಚೆತ್ತರು. ಈ ಕ್ರಾಂತಿಕಾರಿಗಳನ್ನು ಬಂಧಿಸಲು ಬಲೆ ಬೀಸಿದರು. ಅದರ ಸುಳಿವು ಸಿಕ್ಕ ಕೂಡಲೇ, ಬಿಸ್ಮಿಲ್ ಭೂಗತನಾದ. ಆದರೆ ಗೆನ್ದಾಲಾಲ್ ಸೆರೆ ಸಿಕ್ಕುಬಿಟ್ಟ...

once again,ವಿಚಾರಣೆ ಶುರುವಾಯಿತು. ಸಂಘಟನೆಯ ಬಗ್ಗೆ ತಿಳಿದುಕೊಳ್ಳಲು ಆಂಗ್ಲರು ಅನೇಕ ವಿಧದ ಪ್ರಯೋಗ ನಡೆಸಿದರು. ಕೊನೆಗೆ ಗೆನ್ದಾಲಾಲ್ ಒಂದು ಉಪಾಯ ಮಾಡಿ, ತನ್ನ ಸಂಘಟನೆಯ ಬಗ್ಗೆ ಸಂಪೂರ್ಣ ಮಾಹಿತಿ ಕೊಡಲು ಒಪ್ಪಿಕೊಂಡ.. ಅದನ್ನು ನಂಬಿದ ಆಂಗ್ಲರು, ಗೆನ್ದಾಲಾಲನನ್ನು, ಉಳಿದ ಬಂಧಿತ ಕ್ರಾಂತಿಕಾರಿಗಳ ಜೊತೆ ಇಟ್ರು. ಅದೇ ಸಮಯಕ್ಕೆ ಕಾಯುತ್ತಿದ್ದ ಗೆನ್ದಾಲಾಲ್ ಉಳಿದ ಸಹಚರರ ಸಹಾಯದೊಂದಿಗೆ, ಜೈಲಿನಿಂದ ತಪ್ಪಿಸಿಕೊಂಡುಬಿಟ್ಟ...

ಆನಂತರ, ಭೂಗತನಾದ ಗೆನ್ದಾಲಾಲನನ್ನು ಹಿಡಿಯಲು, ಬ್ರಿಟಿಷರು ಮಾಡಿದ ಎಲ್ಲ ಪ್ರಯತ್ನಗಳೂ ವಿಫಲವಾದವು. ಕೊನೆಗೂ ಆತ ಸಿಗಲೇ ಇಲ್ಲ.ಇಷ್ಟರಲ್ಲೇ ಅವನಿಗೆ ಮಾರಣಾಂತಿಕ ಕ್ಷಯ ರೋಗ ತಗುಲಿಬಿಟ್ಟಿತು.. ಅದಕ್ಕೆ ಅವನ ನಿರಂತರವಾದ ಕೆಲಸವೇ ಕಾರಣ. ಚಂಬಲ್ ಕಣಿವೆಯಲ್ಲಿ, ಡಕಾಯಿತರನ್ನು ಸಂಘಟಿಸುವಾಗ, ತನ್ನ ಆರೋಗ್ಯದ ಪರಿವೆಯೂ ಇಲ್ಲದೆ, ಸತತ ಅಲೆದಾಟ, ಅದೂ ಪಾದರಕ್ಷೆಗಳೂ ಇಲ್ಲದೆ, ಊಟ-ನೀರು ಇಲ್ಲದೆ ಅದೆಷ್ಟೋ ದಿನ ಉಪವಾಸದಲ್ಲೇ ದಿನವನ್ನೂ ದೂಡಿದ್ದ.
ಇಷ್ಟೆಲ್ಲಾ ಕಷ್ಟಗಳನ್ನೂ ಸಹಿಸಿದ್ದು ದೇಶಕ್ಕಾಗಿಯೇ, ತನ್ನ ಪ್ರತಿಜ್ನೆಗಾಗಿಯೇ....   ಅವೆಲ್ಲದರ ರೂಪವಾಗಿ TB ತಗುಲಿತು..
ಹೇಗೋ ಅವನನ್ನು ಸರ್ಕಾರಿ ಆಸ್ಪತ್ರೆಗೆ ಸೇರಿಸಲಾಯಿತು. ಆತನ ಹೆಂಡತಿಯೂ ಸೇವೆಗಾಗಿ ಬಂದಳು. ಆದರೆ, ಅದು ಮಾರಣಾಂತಿಕ ಕಾಯಿಲೆ, ಅವನು ಬದುಕುಳಿಯುವುದು ಸಾಧ್ಯವಿರಲಿಲ್ಲ. ಅವನ ಹೆಂಡತಿಯ ಮನವೊಲಿಸಿ, ಮನೆಗೆ ಕಳಿಸಲಾಯಿತು..
ಕೊನೆಗೆ 1920 ರಲ್ಲಿ, ಆ ರೋಗದ ನರಳುವಿಕೆಯಲ್ಲಿಯೇ ಆಸ್ಪತ್ರೆಯಲ್ಲಿ ಅಸುನೀಗಿದ..

ಜೀವನದುದ್ದಕ್ಕೂ ಯಾವ ಸಂಸಾರದ ಸುಖವನ್ನೂ ಬಯಸದೆ, ತನ್ನ ಶಪಥದಂತೆ ಬದುಕಿದ ವ್ಯಕ್ತಿ ಆತ. ಕೇವಲ ಸ್ವಾತಂತ್ರ್ಯಕ್ಕಾಗಿ ಅಲ್ಲದೆ, ಸಮಾಜವಿರೋಧಿಗಳಾಗಿದ್ದ ಡಕಾಯಿತರನ್ನು ಮತ್ತೆ ಸಂಸ್ಕೃತಿಯ ದಾರಿಗೆ ತಂದ ಅಪರೂಪದ ಕ್ರಾಂತಿಕಾರಿ ಆತ..
ಆದರೆ ಎಲ್ಲ ಇತಿಹಾಸದಿಂದ ಅಜ್ಞಾತವಾಗಿಯೇ ಉಳಿದುಹೋದ.
ಒಂದಂತೂ ನಿಜ. ಅವನಂತೂ ತನಗೆ ಪ್ರಸಿದ್ಧಿ ಸಿಗಲಿ ಅನ್ನೋ ಕಾರಣಕ್ಕೆ, ಹೋರಾಟ ಮಾಡಿದವನಲ್ಲ. ಕೇವಲ ದೇಶಕ್ಕಾಗಿ ನಿಸ್ವಾರ್ಥವಾಗಿ ದುಡಿದ ಧೀರೋದಾತ್ತ ವ್ಯಕ್ತಿ ಅವನು.. ಆದ್ರೆ ನಮ್ಮ ಕೃತಘ್ನತೆಯಿಂದ,ಮರೆಯುವಿಕೆಯಿಂದ ಅಂಥಾ ವೀರರೆಲ್ಲ ಮರೆಯಾಗಿದ್ದಾರೆ ಅನ್ನೋದು ದೇಶದ ದುರಂತ..!!
ನವೆಂಬರ್ 30, ಆ ಕ್ರಾಂತಿಕಾರನ ಜನ್ಮದಿನ.. ಆ ಪುಣ್ಯಚೇತನಕ್ಕೆ, ಅನಂತ ಪ್ರಣಾಮಗಳನ್ನು ಸಲ್ಲಿಸುತ್ತಾ, ಅವನ ರಾಷ್ಟ್ರಭಕ್ತಿ ನಮಗೆ ಪ್ರೇರಣೆಯಾಗಲಿ ಎಂಬ ಹಾರೈಕೆಯೊಂದಿಗೆ..
 

ವಂದೇ ಮಾತರಂ..
 

Thursday 22 December 2011

ಇವರನ್ನು ಮರೆಯಲಾದೀತೇ..?!!!!

ಅವತ್ತು ಬೆಳಿಗ್ಗೆ ಅವನು, ಸ್ನಾನ ಮಾಡಿ ಶುದ್ಧನಾದ.. "ಇಂದ್ರಸ್ತ್ವಂ ರುದ್ರಸ್ತ್ವಂ ವಿಷ್ಣುಸ್ತ್ವಂ" ಎಂದು ಮಂತ್ರ ಹೇಳುತ್ತಿದ್ದ.
ಕೂಡಲೇ ಬಂದ ಬ್ರಿಟಿಶ್ ಅಧಿಕಾರಿ, 'ಹೊತ್ತಾಯಿತು ನಡೆ' ಅಂದ..
ನಗುತ್ತಲೇ, ಗಲ್ಲಿನ ಕಂಬದೆಡೆಗೆ ಆತ ನಡೆದ.
ನೇಣು ಕುಣಿಕೆಯ ಎದುರು ನಿಂತಾಗಲೂ ಅವನ ನಗು ಮಾಸಲಿಲ್ಲ.
ಅಧಿಕಾರಿ ಕೇಳಿದ, 'ರಾಮ್' ಇನ್ನೇನು ನಿನ್ನ ಸಾವಾಗುತ್ತೆ.. ಕೊನೆಯಾಸೆ ಏನು? ಅಂತ..
ರಾಮ ಅಧಿಕಾರಿಯ ಕಣ್ಣಲ್ಲಿ ಕಣ್ಣಿಟ್ಟು ಹೇಳಿದ.,
"ನೈನಂ ಛಿನ್ದನ್ತಿ ಶಸ್ತ್ರಾಣಿ
ನೈನಂ ದಹತಿ ಪಾವಕಃ
ನ ಚೈನಂ ಕ್ಲೇದಯಂತ್ಯಾಪೋ
ನ ಶೋಷಯತಿ ಮಾರುತಃ.."
"ನೀವು ಕೇವಲ 'ರಾಮ'ನ ದೇಹವನ್ನು ಸಾಯಿಸಬಹುದು. 'ರಾಮ'ನ ಆತ್ಮವನ್ನಲ್ಲ.. ನನ್ನ ಆದರ್ಶಗಳನ್ನಲ್ಲ.
ನನ್ನ ತಾಯಿಯ ಬಿಡುಗಡೆಯಾಗುವವರೆಗೂ, ನನ್ನ ಆತ್ಮ ಮತ್ತೆ ಮತ್ತೆ ಹುಟ್ಟಿ ಬರುತ್ತಲೇ ಇರುತ್ತದೆ" ಅಂತ ಆ ಬಿಸ್ಮಿಲ್ ಹೇಳುತ್ತಿದ್ದಂತೆ, ಅಧಿಕಾರಿಯೇ ಬೆವೆತು ಹೋದ..

ರಾಮ್ ಪ್ರಸಾದ್ ಬಿಸ್ಮಿಲ್
ಅಶ್ಫಾಕ್ ಉಲ್ಲಾ ಖಾನ್
ರಾಜೇಂದ್ರ ಲಾಹಿರಿ
ರೋಶನ್ ಸಿಂಗ್
                                                                                                     



ಕಾಕೋರಿ ಪ್ರಕರಣದಲ್ಲಿ, ಬಹುತೇಕ 40 ಮಂದಿ, HRA ಸಂಘಟನೆಯ ಕ್ರಾಂತಿಕಾರಿಗಳು ಸಿಕ್ಕಿಬಿದ್ದು ಅವರಿಗೆಲ್ಲಾ ವಿವಿಧ ಶಿಕ್ಷೆಗಳಾದ್ವ. ಅದ್ರಲ್ಲಿ ನಾಲ್ಕು ಜನರಿಗೆ ಗಲ್ಲು ಶಿಕ್ಷೆ..
ರಾಮ್ ಪ್ರಸಾದ್ ಬಿಸ್ಮಿಲ್
ರಾಜೇಂದ್ರ ಲಾಹಿರಿ
ರೋಶನ್ ಸಿಂಗ್
ಅಶ್ಫಾಕ್ ಉಲ್ಲಾ ಖಾನ್..

ರಾಮ್, ಅಶ್ಫಾಕ್ ಮತ್ತು ರೋಶನ್ ಸಿಂಗ್ ಎಲ್ಲರೂ ಷಹಜಹಾನ್ ಪುರದವರೇ..
ರಾಮ್ ಮತ್ತು ರೋಶನ್, 'ಆರ್ಯಸಮಾಜ'ದ ನಿಷ್ಠಾವಂತ ಕಾರ್ಯಕರ್ತರು..
ಆನಂತರ ಅಷ್ಪ್ಹಾಕನೂ ಅವರೊಟ್ಟಿಗೆ ಸೇರಿಕೊಂಡ.

ರಾಜೇಂದ್ರ ಲಾಹಿರಿ ಬಂಗಾಳದ ಯುವಕ, M.A ಪದವೀಧರ. ಅವನಣ್ಣ, ಕಾಶಿಯಲ್ಲಿ ಒಂದು ಹೋಮಿಯೋಪತಿ ಔಷಧಾಲಯ ಇಟ್ಟುಕೊಂಡಿದ್ದ.. ಅಲ್ಲಿಯೇ, ಶಚಿಂದ್ರನಾಥ್ ಸನ್ಯಾಲ್ ಮತ್ತಿತರು ಸೇರಿ ಪ್ರಸಿದ್ಧ "ಹಿಂದುಸ್ತಾನ್ ರಿಪಬ್ಲಿಕನ್ ಅಸೋಸಿಯೇಶನ್" ಪ್ರಾರಂಭಿಸಿದ್ದು.. ಅಲ್ಲಿಯೇ ಆಜಾದನ ಜೊತೆ ಇವನೂ ಸೇರಿಕೊಂಡ.
ಕಾಕೊರಿಯಲ್ಲಿ ಇವರೆಲ್ಲರ ಕಾರ್ಯ ಅದೆಂಥಾದ್ದು ಅನ್ನೋದು ವಿದಿತ ಸಂಗತಿಯೇ..

ಅವರೆಲ್ಲ ನಗುನಗುತ್ತಲೇ ಉರುಳಿಗೆ ಕೊರಳಿತ್ತರು.
ಡಿಸೆಂಬರ್ 17 - ರಾಜೇಂದ್ರ ಲಾಹಿರಿ ಮೃತನಾದ..
ಡಿಸೆಂಬರ್ 19 - ರಾಮ್ ಪ್ರಸಾದ್ ಮತ್ತು ಅಶ್ಫಾಕ್ ಬೇರೆ ಬೇರೆ ಜೈಲಿನಲ್ಲಿ ನೇಣಿಗೇರಿದರು.
ಡಿಸೆಂಬರ್ 20 - ರೋಶನ್ ಸಿಂಗ್ ಗಲ್ಲಿಗೇರಿದ..

ನಾಲ್ವರು ಅಪ್ಪಟ ಸ್ನೇಹಿತರು, ದೇಶಭಕ್ತರು, ಸಾವಿನಲ್ಲೂ ಒಂದಾಗಿದ್ದರು..

ಬಿಸ್ಮಿಲ್, ಜೈಲಿನಲ್ಲಿ ಕೂತು ಒಂದು ಪದ್ಯ ಬರೆದಿದ್ದ..
"ಮರತೆ ಬಿಸ್ಮಿಲ್,ರೋಶನ್,ಲಾಹಿರಿ
ಅಶ್ಫಾಕ್ ಅತ್ಯಾಚಾರ ಸೆ..
ಹೋಂಗೆ ಪೈದಾ ಸೈಕಡೋ
ಉನ್ಕೆ ರುಧಿರ್ ಧಾರ್ ಸೆ.."

ಅವನಾಡಿದ್ದ ಮಾತು, ನಿಜವಾಯಿತು. ಅಸಂಖ್ಯಾತ ತರುಣರು ಮೇಲೆದ್ದು ಭಾರತಿಯನ್ನು ಸ್ವತಂತ್ರಗೊಳಿಸಿದರು..

ಆದರೆ ಅವನ ಮಾತು, ಮತ್ತೊಮ್ಮೆ ಸತ್ಯವಾಗಬೇಕಿದೆ. ನಮ್ಮೆಲ್ಲರ ಹೃದಯದಲ್ಲಿ ಆ ಎಲ್ಲ ಕ್ರಾಂತಿಕಾರಿಗಳ ಪುನಶ್ಚೇತನ ಮಾಡಬೇಕಿದೆ..
ಆ ಎಲ್ಲ ಹುತಾತ್ಮರಿಗೂ ಭಾವಪೂರ್ಣ ನಮನ..

ವಂದೇ ಮಾತರಂ..

Thursday 6 October 2011

                                             ಆಹ್ವಾನ 
                        
                   ನಡುಗಿಸು ತಾಯೆ ಖಳರೆದೆ ನಡುಗಿಸು ತಾಯೆ 
                         ಗುಡುಗುತ ಖಡ್ಗವ ಝಳಪಿಸಿ ನಡುಗಿಸು ತಾಯೆ ..|

                         ಕಂಡಿಹರು ನಿನ್ನಯ ಶುಭ-ಸೌಮ್ಯದ ವದನ
                         ಕಾಣರು ಚಾಮುಂಡಿಯ ಭೀಕರ ಅವತರಣ 
                         ಜಲಜಾಕ್ಷಿಯೇ ತೋರು, ನೆತ್ರದಿ ಅಗ್ನಿಯ ತನನ 
                         ರಕುತದ ಒಕುಳಿಯಾಡು, ಮಾಡುತ ರಿಪುದಮನ ||

                         ತ್ರಿಶೂಲಭೂಷಣೆ ಮಹಿಷಾಸುರ ಮರ್ದಿನಿ ನೀನು 
                         ತಾಮಸಿಗಳ ಸದೆಬಡಿಯುವ ಪ್ರಳಯದೇವಿ ನೀನು,
                         ಭಾರತಮಾತೆಯೇ, ದುರ್ಗೆಯ ನವನವ್ಯಾಕೃತಿಯೇ
                         ಸುಮ್ಮನೆ ಇಹುದೇಕೆ ?, ಶತ್ರುವ ಶಮಿಸದೆ ಇಂದೇ ||

                         ಭಯಗೊಂಡಿಹರು ನಾಡಿನ ಜನರೆಲ್ಲರೂ ಬಹಳ
                         ಸಹಿಸದೆ ದುರುಳರು ಹಿಂಸಿಸಿ ಕೊಡುತಿಹ ಕಷ್ಟಗಳ..
                         ರಕ್ಕಸರ ಸೊಕ್ಕಿನಟ್ಟಹಾಸವ ಮೆಟ್ಟುತಲಿ..
                         ಬಾ ತಾಯೆ ಭಾರತಿ, ಕೆಸರಿವಾಹನೆ ಕಾಳಿ...||

(ಚಿತ್ರಕೃಪೆ - exoticindiaart.com )

Monday 15 August 2011

                    ಸ್ವಾತಂತ್ರ್ಯದ ಬೆಳಕು

          ಸ್ವಾತಂತ್ರ್ಯದ ಬೆಳಕು ಮತ್ತೆ ಪ್ರಜ್ವಲಿಸಿಹುದು 
          ತಮದಿಂದ ನಾಡನುತ್ತರಿಸಲೆಂದೇ..
          ಮಂಜಿನಲಿ ಮರೆಯಾದ ನಾಡಚರಿತೆಯ ಮತ್ತೆ
          ಎಲ್ಲರೆದೆಯಲೂ ಸ್ಫುಟಿಸಿ ಬಿತ್ತರಿಸಲೆಂದೇ...||

          ಬರಿಯ ಪ್ರಭೆಯನು ಕೊಡುವ ಬೆಳಕಲ್ಲ ಇದು ನಿತ್ಯ,
          ರಾಷ್ಟ್ರಚೈತನ್ಯವನು ಬೆಳಗಿಸುವ ಜ್ಯೋತಿ..
          ನಾಡರಕ್ಷಣೆಗೆಂದು ಪ್ರಾಣಕೊಟ್ಟಿಹ ವೀರ,
          ಜನರ ರುಧಿರಾಜ್ಯದಿಂ ಝಗಮಗಿಪ ದೀಪ್ತಿ...||

          ಸುಖದ ನಶೆಯಲಿ ನಾಡುನುಡಿಗಳೆಲ್ಲವ ಮರೆತು,
          ಮೈಹೊದ್ದು ಮಲಗಿರುವ ಯುವಕರನ್ನೇ,
          ದೇಶಭಕ್ತಿಯ ದಿವ್ಯ ಕಿರಣವನೆ ಸೋಕಿಸುತ 
          ಬಡಿದೆಬ್ಬಿಸಲು ಪುಟಿಸಿ ನೆತ್ತರನ್ನೇ..

          ಹೇಡಿತನ,ಜಾಡ್ಯತೆಗಳಿಂದ ದುರ್ಬಲರಿಹರ
          ನರಗಳಲಿ ಹುರುಪೂಡಿ ಹೊಸೆದು ಧೈರ್ಯ 
          ಕಣಕಣವ ಹುರಿದುಂಬಿಸುತ, ಮನದಿ ಹೊತ್ತಿಸಲು,
          ಅನ್ಯಾಯವೆದುರಿಸುವ ಕ್ರಾಂತಿಕಿಡಿಯ...||

          ರತ್ನಸಿಂಹಾಸನದಿ ಕಂಗೊಳಿಪ ಭಾರತಿಯ 
          ಭವ್ಯರೂಪವ ಮತ್ತೆ ತೋರಲಿಂದೇ
          ಸತ್ಯ ಧರ್ಮದ ಶುಭ್ರ ಪ್ರಗತಿ ಮಾರ್ಗದಿ ಮುಂದೆ,
          ಕಣ್ತೆರೆಸಿ ಕೈಪಿಡಿದು ನಡೆಸಲೆಂದೇ...||
                                
                              ಸ್ವಾತಂತ್ರ್ಯ ದಿನ

                              ಕುಣಿಯೋಣ ಸ್ವಾತಂತ್ರ್ಯದ ದಿನವು ಬಂತು,
                              ಭಾರತಕೆ ನವಜನ್ಮ ಬಂದ ದಿನವೆಂದು..
                              ಸ್ವಾತಂತ್ರ್ಯಗೀತೆಗಳ ಹಾಡೋಣ ಇಂಪು,
                              ಬೀರೋಣ ದೇಶದಿತಿಹಾಸದ ಕಂಪು...||

                              ಬೀಸಿ ವ್ಯಾಪಾರ ವ್ಯವಹಾರದ ಜಾಲ,
                              ಭಾರತದಿ ನೂರಾರು ವರ್ಷಗಳ ಕಾಲ,
                              ಆಳಿದರು ಪರದೇಶದವರೆಮ್ಮಯ ನೆಲ,
                              ಹಾಳುಗೆಡುವುತ ನಮ್ಮ ಸಂಸ್ಕೃತಿಯ ಮೂಲ...||

                              ಆಂಗ್ಲರ ದುರಾಡಳಿತ ದೌರ್ಜನ್ಯವುಂಡು,
                              ಬಸವಳಿದ ಜನರ ಬಿಸಿಕಣ್ಣೀರ ಕಂಡು 
                              ಬಂಡೆದ್ದಿತು ಯುವಕ-ಯುವತಿಯರ ದಂಡು,
                              ಕಂಡಲ್ಲಿ, ಆಂಗ್ಲರಿಗೆ ಹೊಡೆದರು ಗುಂಡು...||

                              ಸಾವಿರ ಹುತಾತ್ಮರ ರುಧಿರಾಭಿಷೇಕ 
                              ಕೆಳಗಿಳಿಯಿತು ಸೋತು, ಆಂಗ್ಲರ ಪತಾಕ.
                              ದಾಸ್ಯವನು ಕಳಚಿ, ಪಡೆದಳು ಮುಕ್ತಿ,
                              ಸ್ವಾತಂತ್ರ್ಯದ ನಗೆಯ ಬೀರಿದಳು ಭಾರತಿ...||

                              ಶ್ರಮವಹಿಸಿ ಹಿರಿಯರು ತಂದಿಹ ಸ್ವತಂತ್ರ 
                              ಉಳಿಸದಿರೆ ಆದೇವು, ಮತ್ತೆ ಪರತಂತ್ರ 
                              ಸ್ವಾತಂತ್ರ್ಯರಕ್ಷೆಯಾಗಲಿ ನಮ್ಮ ಮಂತ್ರ 
                              ಸಂಘಟಿಸುವ ಬನ್ನಿ, ಮತ್ತೆ ಜನತಂತ್ರ...||

Thursday 28 July 2011

                                 
                              ರಾಷ್ಟ್ರಯೋಗಿ

                                           ನಾವಾಗುವೆವು ಈ ರಾಷ್ಟ್ರದಯೋಗಿ
                                  ಮಾಡುವೆವು ಭಾರತ ಧ್ಯಾನ.. 
                                  ಧರ್ಮಪತಾಕೆಯನಾರೋಹಿಸುತಾ 
                                  ಮಾಡುವೆವು ರಾಷ್ಟ್ರೋತ್ಥಾನ... ||

                                  ಶೀಲವೇ ಮಾಲೆಯು ಕೊರಳೊಳಗೆ 
                                  ಸುಜ್ಞಾನವೇ ಕಾಷಾಯದ ವಸನ..
                                  ತ್ಯಾಗದ ದಂಡವ ಕೈಯಲಿ ಹಿಡಿದು,
                                  ಮಾಡುವೆವು ರಾಷ್ಟ್ರೋತ್ಥಾನ... ||

                                  ಸ್ವಾರ್ಥಚಿಂತನೆಯ ಭಸ್ಮೀಕರಿಸಿ,
                                  ಎದುರಿಸಿ ಕಷ್ಟಗಳಾವರಣ..
                                  ಸಂತಸಮೂಹವನು ಸಂಘಟಿಸಿ 
                                  ಮಾಡುವೆವು ರಾಷ್ಟ್ರೋತ್ಥಾನ... ||

                                  ನಮ್ಮ ಜನ್ಮದ ಸಾರ್ಥಕ್ಯವಿದು,
                                  ನಮ್ಮ ಮೋಕ್ಷದ ಕಾರಣ..
                                  ನಮ್ಮಯ ಸ್ವರ್ಗದ ಸಾಧನವಿದುವೇ
                                  ಭಾರತ ರಾಷ್ಟ್ರದ ಉತ್ಥಾನ... ||

ಚಿತ್ರಕೃಪೆ:- awakeningthebay.com

Saturday 21 May 2011

( ನಮ್ಮ ನಾಡರಕ್ಷಣೆಗೆ ತಮ್ಮ ಮಾಂಗಲ್ಯಗಳನ್ನು-ಮಡಿಲಕಂದರನ್ನು ಅರ್ಪಿಸಿದಂತಹ ಎಲ್ಲ ಸೈನಿಕರ ಪತ್ನಿ-ತಾಯಂದಿರ ಪಾದಾರವಿಂದಗಳಲ್ಲಿ ಈ ಕವನ ಸಮರ್ಪಣೆ..)                     
                               
                      ತ್ಯಾಗಮಯಿ
                      
                      ಹೊರಟು ನಿಂದಿಹನು ವೀರಸೈನಿಕ 
                      ರಾಷ್ಟ್ರಯುದ್ಧದ ತಯಾರಿಯಲಿ,
                      ವೀರ  ತಿಲಕವ  ಹಣೆಯೊಳಿಟ್ಟಳು
                      ಪತ್ನಿ ಶುಭವ ಹಾರೈಸುತಲಿ..

                      ಮರಳಿ  ನೋಡುವ  ಭರವಸೆಯಿಲ್ಲ 
                      ತುಂಬಿಕೊಂಡಳು ಹೃನ್ಮನದಿ.
                      ನೆನೆದು ನೆನೆದು ಉಮ್ಮಳಿಸಿತು ದುಃಖ
                      ಅಪ್ಪಿಕೊಂಡಳವನೆದೆ ಭರದಿ..

                      ಮಾಂಗಲ್ಯಭಾಗ್ಯವನೆ ಅರ್ಪಿಸುತಿಹಳು 
                      ಮಾತೃಭೂಮಿಯ ರಕ್ಷಣೆಗೆ.
                      ಇಂತಹ ತ್ಯಾಗವೇ ಮಾತೆಯ ಮೊಗದಲಿ 
                      ಅರಳಿಸುವುದು ನೆಮ್ಮದಿಯ ನಗೆ..

                      ಮದ್ದಿನ ಸದ್ದು , ಗುಂಡಿನ ಅಬ್ಬರ 
                      ಗಡಿಯಲಿ ಯುದ್ಧ ಭೀಕರ.
                      ಧೈರ್ಯದಿ ನುಗ್ಗಿ , ಶತ್ರುವ ಮೆಟ್ಟಿ 
                      ಆದರು ಶತ ಸೈನಿಕರಮರ..

                      ಕೊನೆ ಉಸಿರಿನವರೆಗೂ ಹೊರಾಡಿದನು 
                      ಮರೆತು ತನ್ನಯ ಮನೆ-ಮಾರು.
                      ನಾಡಸೇವೆಯ,  ಪೂರೈಸಿದನು 
                      ಬಸಿದು ತನ್ನ ಬಿಸಿ ನೆತ್ತರು..

                      ಬಲಿದಾನದ ಈ ಯಜ್ಞಕುಂಡದಲಿ,
                      ಆಹುತಿಯಾದನು ಯೋಧಪತಿ.
                      ಸುದ್ದಿಯ ತಿಳಿದೂ ಧೃತಿಗೆಡಲಿಲ್ಲ,
                      ಗರ್ವ ಪಟ್ಟಳಾ ವೀರಸತಿ..

                      ಮಗುವನು ಅಪ್ಪಿ ಮುತ್ತನಿಟ್ಟಳು,
                      ಎದೆಯಲಿ ನೋವು ಅಗಾಧ.
                      ಅಣಿಯಾದಳು ಪತಿವಾಕ್ಯವ ನಡೆಸಲು,
                      ಮಾಡಲವನ ನವಯೋಧ..

                      ತನಯನ ಪೊರೆದಳು ಅನುದಿನ ನೀಡಿ,
                      ರಾಷ್ಟ್ರೀಯತೆಯ ಸಂಸ್ಕೃತಿ.
                      ಮಗುವಿನ ಮನದಿ , ಚಿಗುರಿತು ಬಲದಿ
                      ರಾಷ್ಟ್ರಭಕ್ತಿಯ ಜಾಗೃತಿ..

                      ತಂದೆಯ ಮಾರ್ಗವ ಹಿಡಿದನು ಮಗನು,
                      ಹೊರಟು ನಿಂತ ಗಡಿರಕ್ಷಣೆಗೆ.
                      ಕರುಳಬಳ್ಳಿಯನೂ ಅರ್ಪಿಸಿಬಿಟ್ಟಳು
                      ನಾಡಿಗೆ, ಸಮರಾರೀಕೆಗೆ ?!.

                      ತ್ಯಾಗ ಚಿಂತನೆಯ ಪರಮೋನ್ನತಿಯಿದು,
                      ಸರ್ವವು ರಾಷ್ಟ್ರಕೆ ಅರ್ಪಣೆ.
                      ಆ ತ್ಯಾಗಮಯಿಗೆ ನಾ ಶಿರಬಾಗುವೆನು
                      ಅವಳ ತ್ಯಾಗವೇ ಪ್ರೇರಣೆ...

Wednesday 11 May 2011

                                                             ಪ್ರಾರ್ಥನೆ 

                                         ಹೇ ದೇವ ನಿನ್ನಲೊಂದು ನನ್ನ ನಮ್ರ ಪ್ರಾರ್ಥನೆ,
                                 ಕರುಣಿಸು ಈ ವರವನ್ನು ತಡಮಾಡದೆ ಬೇಗನೆ..

                                 ವಿದೇಶಿ ವ್ಯಾಮೋಹದಲಿ, ಸ್ವಾರ್ಥದ ಸಾಧನೆಯಲ್ಲಿ 
                                        ಮುಳುಗಿಹ ನವಯುವಕರು ದೇಶವ ಮರೆತಿಹರು..
                                 ತೊಲಗಲಿ ಆ ವ್ಯಾಮೋಹ, ನಿಸ್ವಾರ್ಥತೆ ಬೆಳೆಯಲಿ,
                                         ಎಲ್ಲರ ಎದೆಯಲೂ ಚಿಮ್ಮಲಿ ದೇಶಭಕ್ತಿ ನೆತ್ತರು...

                                 ಶ್ರೇಷ್ಠ ದಿವ್ಯ ಸನಾತನ ಸಂಸ್ಕೃತಿ ಸಂಸ್ಕಾರಗಳು 
                                         ಪ್ರತಿ ಜನಮಾನಸಗಳಲೂ ಮತ್ತೆ ಉದ್ಭವಿಸಲಿ..
                                 ದ್ವೇಷ-ಅಸೂಯೆಯ ಬಿಟ್ಟು,ಕ್ರೌರ್ಯ-ಅನ್ಯಾಯ ತೊರೆದು, 
                                          ಸಹಕಾರದ ಶುಭಭಾವ ಎಲ್ಲೆಡೆ ವರ್ಧಿಸಲಿ...

                                 ನಾಡಿಗಾಗಿ ಪ್ರಾಣತೆತ್ತ,ದೇಶಭಕ್ತರ ಸ್ಮರಣದಿ,
                                           ನವಭಾರತ ಕಟ್ಟುವ ಉತ್ಸಾಹವು ಪುಟಿದೇಳಲಿ..
                                 ನಾಡದೇವಿ ಭಾರತಿಯ ವಿಜಯಕೀರ್ತಿಧ್ವಜವು,
                                           ಆಕಾಶದ ಎತ್ತರಕೂ ನಿರಂತರ ಹಾರಾಡಲಿ...

ಚಿತ್ರಕೃಪೆ -- facebook.com

Tuesday 10 May 2011

 ( ಈ ಹಾಡು  " जहां डाल डाल पर सोने की चिड़ियाँ कराती है बसेरा " ಎಂಬ ಹಿಂದಿ ಗೀತೆಗೆ ಅದೇ ಧಾಟಿಯಲ್ಲಿ ಬರೆದ ಕನ್ನಡಾನುವಾದ )
                      
                                               ನನ್ನ ಭಾರತ ದೇಶ 

               ಪ್ರತಿರೆಂಬೆಯಲೂ ,  ಚಿನ್ನದ ಹಕ್ಕಿಗಳಿಂಚರ ಕೇಳಿಸುವ ದೇಶ 
             ಅದು ನನ್ನಯ ಭಾರತ ದೇಶ , ಅದು ನನ್ನಯ ಭಾರತ ದೇಶ..
             ಪ್ರತಿಹೆಜ್ಜೆಗೂ ಧರ್ಮ,ಅಹಿಂಸೆ,ಸತ್ಯಗಳ ಭವ್ಯಭವನವಿಹ ದೇಶ 
             ಅದು ನನ್ನಯ ಭಾರತ ದೇಶ , ಅದು ನನ್ನಯ ಭಾರತ ದೇ...
                          ಜೈ  ಭಾರತಿ . . . . . . ಜೈ  ಭಾರತಿ . . . . . .

            ಋಷಿಮುನಿಗಳು ಪ್ರಭುವಿನ ಜಪ ಮಾಡಿಹ ಪಾವನತಮ ಈ ಭೂಮಿಕೆಯೂ 
            ಪ್ರತಿ ಬಾಲಕನೆಲ್ಲೀ  ಮೋಹನನು..  ಆ  ರಾಧಾ  ಪ್ರತಿ ಬಾಲಿಕೆಯೂ..
            ಆ ಸೂರ್ಯನೆಲ್ಲಿಗೆ ಮೊದಲಾಗಮಿಸಿ , ಚೆಲ್ಲುವ ತನ್ನ ಪ್ರಕಾಶ
            ಅದು ನನ್ನಯ ಭಾರತ ದೇಶ , ಅದು ನನ್ನಯ ಭಾರತ ದೇಶ...

            ಗಂಗಾ,ಯಮುನಾ,ಕಾವೇರಿ,ಕೃಷ್ಣೆ ಮೈದುಂಬಿ ಹರಿಯುವುವು ಇಲ್ಲಿ 
            ಸುಧೆಯುಣಿಸುತ ಜನಕೆ , ಉತ್ತರ-ದಕ್ಷಿಣ-ಪೂರ್ವ-ಪಶ್ಚಿಮಗಳಲ್ಲಿ..
            ಹರಡಿಸಿವೆ ಕೇಸರವೆಲ್ಲಿ , ಚಿಗುರಿಸಿ ಫಲ-ಪುಷ್ಪವ ಪ್ರತಿ ವರುಷ 
            ಅದು ನನ್ನಯ ಭಾರತ ದೇಶ , ಅದು ನನ್ನಯ ಭಾರತ ದೇಶ...
          
            ವಿಧ-ವಿಧ ಜನರಿಹ ಈ ನಾಡೊಳಿವೆ, ಬಹುವಿಧ ಹಬ್ಬಗಳ ಕೂಟ 
            ದೀಪಾವಳಿಯುತ್ಸವ  ಸಡಗರ , ಮತ್ತೆ  ಬಣ್ಣದ  ಹೋಳೀ  ಆಟ..
            ಎಲ್ಲೆಲ್ಲೆಡೆ ತುಂಬಿದೆ ರಾಗ-ವರ್ಣಸಂಗಮ , ಪ್ರತಿದಿನ ನಗು ಹರುಷ 
            ಅದು ನನ್ನಯ ಭಾರತ ದೇಶ , ಅದು ನನ್ನಯ ಭಾರತ ದೇಶ...

            ಆಕಾಶದೊಡನೆ ಮಾತಾಡುವುವೆಲ್ಲಿ ಗುಡಿ ಮಂದಿರ ಗೋಪುರವು,
            ನಮ್ಮೀ ನಗರಗಳೀ ದ್ವಾರಗಳೆಂದೂ , ಭಯವಿಲ್ಲದೆ ತೆರೆದಿಹವು..
            ನಿಶಿದಿನವೂ ಹೊಮ್ಮುವುದೆಲ್ಲಿ , ಪ್ರೇಮದ ವೇಣುನಾದ ಪ್ರತಿನಿಮಿಷ 
            ಅದು ನನ್ನಯ ಭಾರತ ದೇಶ , ಅದು ನನ್ನಯ ಭಾರತ ದೇಶ... 
                       ಜೈ  ಭಾರತಿ . . . .  ಜೈ  ಭಾರತಿ . . . . . .

Saturday 7 May 2011

                   
                        ಸುಂದರ..ಭಾರತ..
                              
                              ಆಹಾ ಎಂತಹ ಪಾವನ ನಾಡು 
                                 ನಮ್ಮೀ ಸುಂದರ ಭಾರತ..
                              ವರ್ಣನೆಗೂ ನಿಲುಕದ ಕಲೆಬೀಡು
                                 ಕವಿಗಳಿಗೂ ಇದು ಸಮ್ಮತ...

                              ಸ್ವರ್ಗದ ಅಮರರು ಕಾಯುತಲಿಹರು 
                                 ಜನಿಸಲು ಭಾರತಭೂಮಿಯಲಿ..
                              ಸಾರಿವೆ ವೇದ-ಪುರಾಣಗಳಿದನು
                                 ಸಂಶಯ ಬೇಡ ಈ ಮಾತಿನಲಿ...

                              ಭುವಿಗಿಳಿಯಲು ಗಂಗೆ ಆರಿಸಿಕೊಂಡಳು,
                                 ಪವಿತ್ರ ಭಾರತ ಭೂಮಿಯನೆ..
                              ಸಿರಿ ಬಂದಳು ಮುನಿಸಿ ಪತಿ ಮೇಲಿಲ್ಲಿ,
                                 ಇದಲ್ಲವೇ ಅವಳ ತವರು ಮನೆ..

                              ಆದರ್ಶ ರಾಮನಾಳಿದ ಮಹಸಂಸ್ಥಾನ,
                                 ವೀರ ಹನುಮನುದಿಸಿದ ತಾಣ..
                              ಶ್ರೀಕೃಷ್ಣನ ಲೀಲೆಗಳುದ್ಯಾನವನ,
                                 ಸ್ವರ್ಗವೂ ತಾಳಿದೆ ಬರಿ ಮೌನ...

                              ಮಹಿತಮಹಾಮಹಿಮರು ಜನಿಸಿಹ ಈ  
                                 ಪುಣ್ಯ ನಾಡೊಳೆನ್ನಯ ಜನನ..
                              ಪೂರ್ವ ಜನ್ಮಗಳ ಸುಕೃತವಲ್ಲದೇ,
                                 ಮತ್ತಿನ್ನೇನಿದೆ  ಕಾರಣ !!??....||

Wednesday 4 May 2011

                                                
 
                      
                                  ರಾಷ್ಟ್ರಸೇವಕ
                     ನಾವು ರಾಷ್ಟ್ರಸೇವಕರು, ಕೆಚ್ಚೆದೆಯ ಯುವಕರು..
                             ದೇಶಭಕ್ತಿಯ ವ್ರತವ ಸ್ವೀಕರಿಸಿಹ ವೀರರು...  

                             ಇತಿಹಾಸದ ಪ್ರಖರ ದಿವ್ಯ ಜ್ಯೋತಿಯ ತೆಜಸ್ಸಿನಲಿ,
                                  ಶೋಧಿಸಿಯೇ ಈ ಮಾರ್ಗದಿ ಮುನ್ನಡೆದಿಹೆವು..
                             ದೃಢಮಾನಸ ನಿಶ್ಚಯದಿ, ಬುದ್ಧಿ ಪುರಸ್ಸರವಾಗಿ,
                                  ದಿವ್ಯಾಗ್ನಿಯಲಿ ಭಸ್ಮವಾಗಲು ನಿಶ್ಚಯಿಸಿಹೆವು...

                             ದೇಶದ ಉನ್ನತಿಯೆಮ್ಮಯ ಜೀವನದಂತಿಮ ಗುರಿ,
                                  ನಡೆವೆವು ಲೆಕ್ಕಿಸದಲೇ ಬಂದರೂ ಕಷ್ಟಗಳೇರಿ..
                             ಇದ್ದರೂ ನಮ್ಮೆದುರು ಬರಿ ಮುಳ್ಳಿನ ಹೆದ್ದಾರಿ,
                                  ಗೆಲ್ಲುವೆವೀ ಕಾಯಕದಿ ಬಾರಿಸಿ ಜಯಭೇರಿ...

                             ದುಷ್ಟರ ದರ್ಬಾರನು ಕಡೆಗಾಣಿಸಿ, ಶುಭನೈತಿಕ
                                  ಸಾಮ್ರಾಜ್ಯವ ಕಟ್ಟುವೆವು ಚಾಣಕ್ಯನ ತೆರದಿ..
                            ಎತ್ತುತ ಮೆಟ್ಟುತ ಧರ್ಮಾಧರ್ಮವ ಪಾಂಡವರಂತೆ,
                                  ಶಾಂತಿಯ ಸಮೃದ್ಧಿಯ ಸ್ಥಿರವಿಡುವೆವು ಭಾರತದಿ...

ಚಿತ್ರಕೃಪೆ --  article.wn.com

Sunday 1 May 2011


                                       ಐಕ್ಯತೆ

                              ಒಂದೇ ನೆಲದಲಿ ಬೆಳೆದ ಬಗೆಯ ಹೂಗಳು ನಾವು 
                              ಒಟ್ಟಾಗಿ ಭಾರತಿಯ ಪಾದಕೆರಗೋಣ..
                              ಐಕ್ಯತೆಯ ಮಂತ್ರವನ್ನು ಜಪಿಸುತಲಿ ನಾವಿಂದು 
                              ಒಂದುಗೂಡುತ ಭವ್ಯ ರಾಷ್ಟ್ರ ಕಟ್ಟೋಣ..

                              ಮಳೆಬಿಲ್ಲ ಹೊಳೆವೇಳು ಬಣ್ಣಗಳು ನಾವಿಂದು 
                              ಒಂದಾಗಿ ಬಿಳಿಬಣ್ಣವಾಗಿ ಪಸರಿಸುವ..
                              ಸಂಗೀತದೇಳು ಶುಭಸ್ವರಗಳು ನಾವೊಂದು 
                              ರಾಗದಲಿ ಹಾಡಾಗಿ ಹೊರಹೊಮ್ಮುವ..

                              ಅತ್ತಿತ್ತ  ಹರಡಿರುವ  ನವರತ್ನಗಳು ನಾವು 
                              ಮಾಲೆಯಾಗುವ ಒಂದು ಸೂತ್ರದೊಳು ಕೂಡಿ..
                              ನೂರಾರು ಚಿಕ್ಕ ನಕ್ಷತ್ರಗಳು ನಾವೆಲ್ಲಾ 
                              ಆಗಸವ ಸೊಗಸಾಗಿ ಮಿನುಗಿಸುವ ಕೂಡಿ..

                              ನೀರಹನಿಗಳು ನಾವು ಆವಿಯಾಗುವ ಮುನ್ನ 
                              ಕೂಡಿ ಹೆದ್ದೊರೆಯಾಗಿ ಹರಿಯೋಣ ಬನ್ನಿ..
                              ಅಗ್ನಿಕಣಗಳು ನಾವು ಆರಿಹೋಗುವ ಮುನ್ನ 
                              ಒಗ್ಗೊಡಿ ಪ್ರಜ್ವಲಿಸಿ ನಾಡ ಬೆಳಗುವ ಬನ್ನಿ..

Friday 29 April 2011

                                                                 ನಾಡತೇರು

                                                      ಕಂಗೊಳಿಸುತಿಹ
                                           ಭಾರತಿಯ ಮೂರ್ತಿಗೆ
                                           ಹೂವುಗಳ ಸುರಿದಾರು...
                                           ಮಜ್ಜನವ ಮಾಡಿಸೆ
                                           ನಾಡದೇವಿಗೆ
                                           ತಂದಿಹರು ಹೊನ್ನೀರು...
                                           ಎಳೆಯೋಣ ಸೇರಿ ಎಲ್ಲರೂ...
                                           ಈ ನಾಡ ಸುಂದರ ತೇರು...


                                           ಪ್ರತಿನಿತ್ಯ ರವಿ-
                                           ವಿಧು-ತಾರೆಗಳು
                                           ಆರತಿಯ ಬೆಳಗುತಲಿಹರು...
                                           ಗಿರಿ-ವನ-ನದಿ
                                           ದೇವತೆಗಳೆಲ್ಲರೂ
                                           ಬಾಗಿ ನಮಿಸುತಲಿಹರು...
                                           ಎಳೆಯೋಣ ಸೇರಿ ಎಲ್ಲರೂ...
                                           ಈ ನಾಡ ಸುಂದರ ತೇರು...


                                           ನವಪ್ರಗತಿಪಥ
                                           ರಥಬೀದಿಯಲಿ
                                           ಮುನ್ನಡೆಯಲಿ ಬಲುಜೋರು...
                                           ನೋಡುತಲಿ ರಥದ
                                           ಧ್ವಜವ ದುಷ್ಟರು
                                           ದೂರದಲೇ ಸರಿದಾರು...
                                           ಎಳೆಯೋಣ ಸೇರಿ ಎಲ್ಲರೂ...
                                           ಈ ನಾಡ ಸುಂದರ ತೇರು...


                                           ಬಹುಭಾಷೆಗಳ
                                           ಹತ್ತಾರು ಸಂಸ್ಕೃತಿ
                                           ಧರ್ಮಗಳ ತವರೂರು...
                                           ಹೊಸ ಸವಿಕನಸು
                                           ನೂರಾಸೆ ಬಯಕೆಯ
                                           ಕಾಣುತಿಹ ಜನರೂರು...
                                           ಎಳೆಯೋಣ ಸೇರಿ ಎಲ್ಲರೂ...
                                           ಈ ನಾಡ ಸುಂದರ ತೇರು...


                                           ತುಂಬುತಿದೆ ಮನದಿ 
                                           ದೇಶಭಕ್ತಿಯ 
                                           ಸುತ್ತುತಲಿ ಊರೂರು...
                                           ಅತಿಭಾವಪರ-
                                           ವಶರಾಗಿ ಜನರು 
                                           ಹಾಡಿ ಕುಣಿಯುತಲಿಹರು...
                                           ಎಳೆಯೋಣ ಸೇರಿ ಎಲ್ಲರೂ...
                                           ಈ ನಾಡ ಸುಂದರ ತೇರು...